ಕ್ಲಾಪ್‍ಷ್ಟಾಕ್, ಫ್ರಿಡ್ರಿಕ್ ಗಾಟ್‍ಲೀಪ್	
 	1724-1803. ಜರ್ಮನ್ ಕವಿ. ಆಚಾರವಂತ ಹಾಗೂ ಸದ್ಗುಣಿ ವಕೀಲನೊಬ್ಬನ ಹಿರಿಯ ಮಗ. ಹುಟ್ಟಿದ್ದು ಕ್ವೇಡಿನ್‍ಬರ್ಗ್‍ನಲ್ಲಿ. ದೃಢಕಾಯನಾಗಿ ಬೆಳೆದು ಅತ್ಯುತ್ತಮ ಅಶ್ವಾರೋಹಿ ಮತ್ತು ಸ್ಕೇಟರ್ ಎನಿಸಿಕೊಂಡ. 1739ರಲ್ಲಿ ಸ್ಚುಲ್ಪ್ ಪೋರ್ಟ್‍ಶಾಲೆಗೆ ಸೇರಿ ಓದುತ್ತಿರುವಾಗಲೇ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗ¼ಲ್ಲಿ ಕವಿತೆಗಳನ್ನು ರಚಿಸಿದುದಲ್ಲದೆ ಜರ್ಮನ್ ಭಾಷೆಯಲ್ಲೂ ಗ್ರಾಮೀಣ ಪದ್ಯಗಳು ಹಾಗೂ ಭಾವಗೀತೆಗಳನ್ನು ರಚಿಸಿ ನಿಪುಣ ಕವಿ ಎನಿಸಿಕೊಂಡ. ಅಲ್ಲಿಂದ ಯಾನ ಮತ್ತು ಲೀಪ್‍ಜಿûಗ್ ವಿಶ್ವವಿದ್ಯಾಲಯಗಳಲ್ಲಿ ಓದು ಮುಂದುವರಿಸಿದ. ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಕವಿತೆಗಳನ್ನು ರಚಿಸಿದ ಈತ ಮಹಾಕಾವ್ಯ ರಚನೆಯೊಂದಕ್ಕೆ ಅಪೂರ್ವ ಸಿದ್ಧತೆ ಮಾಡಿಕೊಂಡ. ಬೊಡ್‍ಮರ್ ಭಾಷಾಂತರಿಸಿದ ಮಿಲ್ಟನನ ಪ್ಯಾರಡೈಸ್ ಲಾಸ್ಟ್ ಓದಿ ಅದರಿಂದ ಪ್ರಭಾವಿತನಾಗಿ ತನ್ನ ಮಹಾಕಾವ್ಯಕ್ಕೆ ಚಕ್ರವರ್ತಿ ಒಂದನೆಯ ಹೆನ್ರಿಯನ್ನು ನಾಯಕನನ್ನಾಗಿ ಮಾಡಿಕೊಂಡು ಮತಧರ್ಮದ ಕಥೆಯನ್ನು ಆಧರಿಸಿ ಅಂಥದೇ ಒಂದು ಕಾವ್ಯ ರಚಿಸಲು ನಿರ್ಧರಿಸಿದ. ಆ ಮಹಾಕಾವ್ಯವೇ ಡೆರ್ ಮೆಸೈಯಾಸ್. ಮೊದಲಿಗೆ (1748) ಇದರ 3 ಸಂಧಿಗಳನ್ನು ರಚಿಸಿ ಪ್ರಕಟಿಸಿದ. ಇದು ಅಪಾರ ಯಶಸ್ಸು ತಂದಿತು. ಅದೇ ವರ್ಷ ಲಾಂಜೆನ್‍ಸಾಲ್ಚಾನಲ್ಲಿ ತನ್ನ ಸಂಬಂಧಿಕರ ಮಕ್ಕಳಿಗೆ ಪಾಠ ಹೇಳಲು ಖಾಸಗಿ ಶಿಕ್ಷಕನಾಗಿ ನಿಂತ.

	1750ರಲ್ಲಿ ಪ್ರಸಿದ್ಧ ಸ್ವಿಸ್ ವಿಮರ್ಶಕ ಹಾಗೂ ಮಿಲ್ಟನನ ಪ್ರಾರಡೈಸ್ ಲಾಸ್ಟ್‍ನ ಭಾಷಾಂತರಕಾರ ಜಾಕಬ್ ಬೊಡ್ ಮರನನ್ನು ಸಂಧಿಸಿದ. ಇದೇ ಸಮಯದಲ್ಲಿ ಡೆನ್ಮಾರ್ಕಿನ ದೊರೆ ಐದನೆಯ ಫ್ರೆಡ್ರಿಕ್ ತನ್ನ ಮಂತ್ರಿ ಬರ್ನ್‍ಸ್ಟೋರ್ಫ್‍ನ ಶಿಫಾರಸ್ಸಿನ ಮೇಲೆ ಕ್ಲಾಪ್‍ಷ್ಟಾಕನನ್ನು ಕೊಪೆನ್‍ಹೇಗನ್‍ನಲ್ಲಿ ನೆಲಸಿ ಮೆಸೈಯಾಸ್ ಕಾವ್ಯವನ್ನು ಪೂರೈಸುವಂತೆ ಆಹ್ವಾನಿಸಿದ. ವರ್ಷಕ್ಕೆ ನಾಲ್ಕು ನೂರು ಡಾಲರುಗಳನ್ನು ನಿಗದಿಪಡಿಸಿದ. ಏತನ್ಮಧ್ಯೆ. ಡೆನ್ಮಾರ್ಕಿಗೆ ಹೋಗುವ ಮಾರ್ಗವಾದ ಹಮ್‍ಬರ್ಗ್‍ನಲ್ಲಿ ಮಾರ್ಗರೇಟ (ಮೇಟ) ಮೊಲರ್‍ಳನ್ನು ಸಂಧಿಸಿ(ಕ್ಲಾಪ್ ಷ್ಟಾಕನ ಗೀತೆಗಳಲ್ಲಿ ಬರುವ ಸಿಡ್ಲಿ ಈಕೆಯೇ) 1754ರಲ್ಲಿ ಆಕೆಯನ್ನೇ ಮದುವೆಯಾದ. ಆದರೆ ಈ ಸಂತೋಷ ಬಹುಕಾಲ ಉಳಿಯಲಿಲ್ಲ. 1758ರಲ್ಲಿ ಆಕೆ ಸತ್ತಳು. ಆಗ ಈತ ಅನುಭವಿಸಿದ ದುಃಖವನ್ನು ಮೆಸೈಯಾಸ್ ಕಾವ್ಯದ 15ನೆಯ ಸಂಧಿಯಲ್ಲಿ ಕಾಣಬಹುದು. 1759ರಲ್ಲಿ ಆಕೆಯ ಬರೆಹಗಳನ್ನು ಈತನೇ ಪ್ರಕಟಿಸಿದ. ಅಲ್ಲಿಂದ ಕ್ಲಾಪ್‍ಷ್ಟಾಕ್ ಏಕಾಂಗಿಯಾದ; ಬರೆವಣಿಗೆ ಕುಂಠಿತವಾಯಿತು. ಬರೆದದ್ದು ಶುಷ್ಕವಾಗಿ ಕಂಡಿತು. 1770ರಲ್ಲಿ ಬರ್ನ್‍ಸ್ಟೋರ್ಫ್ ಮಂತ್ರಿ ಪದವಿಯಿಂದ ನಿರ್ಗಮಿಸಿದಾಗ ಈತನೂ ಆತನ ಜೊತೆಯಲ್ಲಿಯೇ ಹೊರಟು ಬಂದು ಹಮ್‍ಬರ್ಗ್‍ನಲ್ಲಿ ನೆಲೆಸಿದ. 1773ರಲ್ಲಿ ಮೆಸೈಯಾಸ್ ಕಾವ್ಯದ ಕೊನೆಯ ಐದು ಸಂಧಿಗಳನ್ನು ಬರೆದು ಪ್ರಕಟಿಸಿದ. 1774ರಲ್ಲಿ ಜರ್ಮನರ ಜೀವನ ಹಾಗೂ ಸಾಹಿತ್ಯದ ಪುನರಜ್ಜೀವನಕ್ಕಾಗಿ, ಅವರ ರಾಜಕೀಯ, ಸಾಂಸ್ಕøತಿಕ ವಿದ್ಯಾಭ್ಯಾಸಕ್ಕಾಗಿ ಒಂದು ಯೋಜನೆ ತಯಾರಿಸಿ ಪ್ರಕಟಿಸಿದ.

	1775ರಲ್ಲಿ ದಕ್ಷಿಣದ ಕಡೆಗೆ ಹೊರಟ ಈತ ಮಾರ್ಗದಲ್ಲಿ ಗಯಟೆಯನ್ನು ಸಂಧಿಸಿದ. ಅಲ್ಲಿಂದ ಒಂದು ವರ್ಷ ಸೇನಾಧಿಪತಿಯೊಬ್ಬನ ಆಸ್ಥಾನದಲ್ಲಿದ್ದ. 1776ರಲ್ಲಿ ಆತನಿಂದ ಹೊಫ್ರ್ಯಾಟ್ ಎಂಬ ಗೌರವ ಪದವಿ ಹಾಗೂ ನಿವೃತ್ತಿವೇತನ ಪಡೆದು ಹಮ್‍ಬರ್ಗ್‍ಗೆ ಬಂದು ತನ್ನ ಜೀವಿತದ ಉಳಿದ ದಿನಗಳನ್ನು ಅಲ್ಲಿಯೇ ಕಳೆದ.

	ಮೊದಮೊದಲು ಫ್ರಾನ್ಸಿನ ಮಹಾಕ್ರಾಂತಿಯ ಬಗ್ಗೆ ಈತನಿಗೆ ಅಪಾರ ಸಹಾನುಭೂತಿ ಇತ್ತು. ಫ್ರೆಂಚ್ ಗಣರಾಜ್ಯ ಈತನನ್ನು ಗೌರವ ಪ್ರಜೆಯೆಂದು ಪರಿಗಣಿಸಿತು. ಕ್ರಾಂತಿ ಅತಿರೇಕಕ್ಕೆ ತಿರುಗಿದಾಗ ಬೇಸರಗೊಂಡ ಈತ ಗೌರವವನ್ನು ನಿರಾಕರಿಸಿದ. ತನ್ನ 67ನೇ ವಯಸ್ಸಿನಲ್ಲಿ ಮೊದಲ ಹೆಂಡತಿಯ ಸೋದರ ಸಂಬಂಧಿಯಾದ ವಿಧವೆ ಯೋಹಾನ್ನ ಎಲಿಜûಬೆತ್‍ಳನ್ನು ಮದುವೆಯಾದ. ಈಕೆಯೊಂದಿಗೆ ಅನೇಕ ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿದ. 1803ರಲ್ಲಿ ಈತ ಸತ್ತ. ಆಗ ಇಡೀ ಜರ್ಮನಿಯೇ ದುಃಖಿಸಿತು. ಓಟೆನ್‍ಸೆನ್ ಗ್ರಾಮದ ಚರ್ಚ್ ಅಂಗಳದಲ್ಲಿ ಈತನ ಮೊದಲ ಹೆಂಡತಿಯ ಸಮಾಧಿಯ ಬಳಿಯೇ ಈತನನ್ನು ಸಮಾಧಿ ಮಾಡಲಾಯಿತು. 

ಈತನ ಮಹಾಕಾವ್ಯ ಡೆರ್ ಮೆಸೈಯಾಸ್ (ಪ್ರವಾದಿಗಳು-1773) ಭಾವಪೂರ್ಣವಾಗಿದ್ದು ವಿಕೃತ ಕರುಣರಸ ಹಾಗೂ ಭಕ್ತಿಯನ್ನು ಸೂಸುತ್ತದೆ. ಕ್ರಿಸ್ತನ ಉದಾತ್ತ ಜೀವನ ಇಲ್ಲಿ ಪಡಿಮೂಡಿದೆಯಾಗಿ ಜರ್ಮನ್ ಸಾಹಿತ್ಯದಲ್ಲೇ ಈ ಕಾವ್ಯಕ್ಕೆ ಉನ್ನತ ಸ್ಥಾನವಿದೆ. ಈ ಕಾವ್ಯ ರಚಿಸಲು ಈತ 25 ವರ್ಷಗಳನ್ನು ತೆಗೆದುಕೊಂಡ. ಇದು 17 ಭಾಷೆಗಳಿಗೂ ಮಿಕ್ಕಿ ತರ್ಜುಮೆಯಾಗಿದೆ. ಈತ ಬರೆದ ನಾಟಕಗಳಲ್ಲಿ ಹೆರ್‍ಮಾನ್ಸ್ ಷ್ಲಾಟ್ (1769) ಉತ್ತಮವಾದುದು. ಜರ್ಮನ್ ಸಾಹಿತ್ಯ ಮತ್ತು ತತ್ತ್ವಶಾಸ್ತ್ರಗಳ ಬಗ್ಗೆ ಈತ ಅನೇಕ ಲೇಖನಗಳನ್ನು ಬರೆದಿದ್ದಾನೆ. ಮೆಸೈಯಾಸ್ ಕಾವ್ಯದಲ್ಲಿ ಈತ ಬಳಸಿದ ಷಡ್ಗಣ ಪಾದಗಳ ಛಂದಸ್ಸು ಜರ್ಮನ್ ಕಾವ್ಯ ಪ್ರಪಂಚಕ್ಕೆ ಹೊಸ ತಿರುವನ್ನು ನೀಡಿತು. ಈತ ತನ್ನ ಭಾವಗೀತೆಗಳಲ್ಲಿ ಅಳವಡಿಸಿರುವ ಮುಕ್ತ ಛಂದಸ್ಸು ಈತನ ಕಾವ್ಯಶಕ್ತಿಯ ದ್ಯೋತಕವಾಗಿದೆ. 									(ಟಿ.ವಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ